ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಸೋಮವಾರ, ಮಾರ್ಚ್ 7

ಕೊನೆಯೇ ಇಲ್ಲದ ದುರಂತ ಕಥೆ...

ಇದು ದುರಂತಮಯ ಬದುಕಿನ ಕಟು ಸತ್ಯ... ವೈದ್ಯ ಲೋಕಕ್ಕೆ ಸವಾಲಾಗಿರುವ ವಿಚಿತ್ರ ರೋಗಗಳ ಆಗರ. ಹಾಗಂತ ಇದು ಪ್ರಕೃತಿ ನಿರ್ಮಿತ ಸಮಸ್ಯೆಯಲ್ಲ.  ಬದಲಾಗಿ ಮಾನವನ ಅತೀ ಬುದ್ದಿವಂತಿಕೆಯಿಂದಾದ ಒಂದು ದೊಡ್ಡ ದುರಂತ. ಆದ್ದರಿಂದಲೇ ಇದಕ್ಕೆ ಪರಿಹಾರವಿಲ್ಲದೆ ಇಂದಿಗೂ ಜೀವಂತವಾಗಿರುವುದು. ಇಲ್ಲಿ ಕಣ್ಣೀರಿಡುವ ತಾಯಂದಿರು,   ಮಾತನಾಡಲಾಗದ ಅಶಕ್ತ ಮಕ್ಕಳು, ಬುದ್ಧಿ-ದೇಹ ಸ್ವಾಧೀನವಿಲ್ಲದೆ ನರಳುತ್ತಿರುವವರು, ಸಮಾಜದಲ್ಲಿ ಎಲ್ಲರಂತೆ ಬಾಳಬೇಕೆನ್ನುವ ಆಸೆ ಇದ್ದರೂ ಬದುಕಲೊಂದೂ ಬಾಳೂ ಇಲ್ಲದೆ ಕೊರಗುತ್ತಿರುವವರೂ ಹೀಗೇ ನೋವಿನ ಮಡುವಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಅದೆಷ್ಟೋ ಜೀವಗಳಿವೆ. ಇದಕ್ಕೆಲ್ಲಾ ಕಾರಣ ’ಎಂಡೋಸಲ್ಫಾನ್’.
      ಅದು ೧೯೮೩ನೇ ಇಸವಿ. ಏನೂ ಅರಿಯದೇ ನಿಶ್ಚಿಂತೆಯಿಂದ ಜೀವಿಸುತ್ತಿದ್ದ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಕೆಲವು ಗ್ರಾಮಗಳ ನಿವಾಸಿಗಳಿಗೆ ಮುಂದೆ ಇಂತಹದೊಂದು ದುರಂತ ಬಂದೊದಗುತ್ತದೆ ಎಂಬ ಕನಸೂ ಬಿದ್ದಿರದ ದಿನಗಳವು. ಆದರೆ ಅದೇ ಸಮಯದಲ್ಲಿ ಗೇರುಬೀಜ ಕೃಷಿಗೆ ಬರುವಂತಹ ಕೀಮೊಸ್ಕ್ಯೊಟೋ ಎಂಬ ಸೊಳ್ಳೆಯನ್ನು ಹೋಗಲಾಡಿಸಲು ’ಗೇರು ಅಭಿವೃದ್ಧಿ ನಿಗಮ’ ಹೆಲಿಕಾಫ್ಟರ್ ಮೂಲಕ ಎಂಡೋಸಲ್ಫಾನ್ ಕೀಟನಾಶಕವನ್ನು ಅವ್ಯಾಹತವಾಗಿ ಸಿಂಪಡಿಸುತ್ತಿತ್ತು. ಅಲ್ಲಿಂದ ಮುಂದೆ ಆದದ್ದೆಲ್ಲಾ ದುರಂತಗಳ ರೌದ್ರನರ್ತನ. ಇದ್ದಕ್ಕಿದ್ದಂತೆ ಕೇರಳದ ಕಾಸರಗೋಡಿನ ಕೆಲವು ಗ್ರಾಮಗಳು, ದಕ್ಷಿಣ ಕನ್ನಡದ ಕೊಕ್ಕಡ, ಪಟ್ರಮೆ, ನಿಡ್ಲೆ ಪ್ರದೇಶದಲ್ಲಿ ಸಣ್ಣವರು ದೊಡ್ಡವರು ಎಂಬ ಬೇಧವಿಲ್ಲದೆ ೨೫೦ಕ್ಕೂ ಅಧಿಕ ಮಂದಿ ಕ್ಯಾನ್ಸರ್, ಮಾನಸಿಕ ವಿಕಲತೆಗಳಂತಹ ವಿಲಕ್ಷಣ ರೋಗಗಳಿಗೆ ತುತ್ತಾದರು. ಅಚಾನಕ್ಕಾಗಿ ಕಾಣಿಸಿಕೊಂಡ ಈ ವಿಪ್ಲವದ ಮೂಲ ಹುಡುಕ ಹೊರಟಾಗ ಹೊರಬಿದ್ದ ಹೆಸರು ’ಎಂಡೋ ಸಲ್ಫಾನ್’.
        ಈ ವ್ಯಥೆ ಇಷ್ಟಕ್ಕೇ ನಿಲ್ಲಲಿಲ್ಲ. ಅದಾಗಲೇ ಅರ್ಧ ಬದುಕು ಸವೆಸಿ ವ್ಯಾಧಿಗೆ ತುತ್ತಾದವರು ಸಾಲದು ಎಂಬಂತೆ ಎಂಡೋ ಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳ ಬದುಕಲ್ಲಂತೂ ಸಂಪೂರ್ಣ ಕತ್ತಲು. ಅಂಗವಿಕಲ, ಬುದ್ಧಿ ಮಾಂದ್ಯ ಮಕ್ಕಳ ಸರಣಿಯೇ ಬೆಳೆಯಿತು. ಕಳೆದ ಇಪ್ಪತ್ತು ವರ್ಷಗಳಿಂದ, ಅದೆಷ್ಟೋ ತಾಯಂದಿರು ಸಮಾಜದೆದುರು ನಗುತ್ತಿದ್ದರೂ ಒಳಗೊಳಗೇ ದುಖಃದ ಬೇಗೆಯಲ್ಲಿ ಬೆಂದು ಹೋಗಿದ್ದಾರೆ. ಈ ನಡುವೆ ಆರಿ ಹೋದ ಅದೆಷ್ಟೋ ಬಡಕುಟುಂಬಗಳ ಜೀವನದ ಆಸರೆಯನ್ನು ಲೆಕ್ಕವಿಡುವವರಂತೂ ಇರಲೇ ಇಲ್ಲ. ಇದು ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭಸಿದಂತಲ್ಲವೇ.
ಹೋಗಲಿ... ಆಗಿದ್ದು ಆಗಿ ಹೋಯಿತು. ಆದ ತಪ್ಪಿಗೆ ಪ್ರಾಯಶ್ಚಿತ್ತ ಎನ್ನುವಂತೆ ಸರ್ಕಾರ ಆ ಬಡಕುಟುಂಬಗಳಿಗೆ ಹಲವು ಬಾರಿ ಉಚಿತ ವೈದಕೀಯ ಶಿಬಿರಗಳನ್ನು ಏರ್ಪಡಿಸಿತು. ಆದರೇನು ಪ್ರಯೋಜನ? ವೈದ್ಯರು ಬರುತ್ತಿದ್ದರು, ಒಂದೆರಡು ಜನಗಳಿಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದರು. ಆ ನಂತರ ರೋಗಿಯ ಸ್ಥಿತಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನ ಯಾರಿಗೂ ಇಲ್ಲ. ಇದರಿಂದ ಬೇಸತ್ತ ಜನ ಕಡೆ ಕಡೆಗೆ ಈ ಶಿಬಿರಗಳ ಮೇಲೆ ನಂಬಿಕೆಯನ್ನೇ ಕಳಕೊಂಡರು. ಇನ್ನು ಈ ಪ್ರದೇಶದ ನಿರಾಶ್ರಿತರಿಗೆ ಪರಿಹಾರ ಕೊಡಿಸುವುದಕ್ಕಾಗಿ ಎಂಡೋಸ್ಫಲಾನ್ ನಿರಾಶ್ರಿತರ ಅಧ್ಯಕ್ಷ ಶ್ರೀಧರ್ ಎಪ್ಪತ್ತೆರಡು ಬಾರಿ ವಿಧಾನ ಸೌಧದ ಮೆಟ್ಟಿಲು ಹತ್ತಿ ಇಳಿದಿದ್ದಾರೆ. ಬಹುಷಃ ಇದೊಂದು ದಾಖಲೆಯೇ ಆಗಿರಬಹುದು.
         ಇಷ್ಟೆಲ್ಲಾ ಪ್ರಯತ್ನದ ನಂತರ, ಪ್ರಸಕ್ತ ಸರಕಾರ ಎಂಡೋಸ್ಫಲಾನ್ ನಿರಾಶ್ರಿತರಿಗೆ ತಲಾ ಐವತ್ತು ಸಾವಿರ ರೂಪಾಯಿಗಳ ಪರಿಹಾರ ನೀಡಲು ಸಮ್ಮತಿಸಿ, ಕೊನೆಗೂ ಅದನ್ನು ನೊಂದವರ ಕೈದಾಟಿಸಿತು. ವಿಚಿತ್ರವೆಂದರೆ ಆ ನಂತರ ಒಬ್ಬನೇ ಒಬ್ಬ ರಾಜಕಾರಣಿಯೂ ಇತ್ತ ಕಡೆ ತಲೆ ಹಾಕಿ ಮಲಗಿಲ್ಲ. ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆಯೋ? ಇಲ್ಲವೋ? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಇದೀಗ ಮತ್ತೊಮ್ಮೆ ಜನರ ಕಣ್ಣಿಗೆ ಮಣ್ಣೆರಚಲು ಸರ್ಕಾರಗಳು ಸಜ್ಜಾಗಿವೆ. ಈ ವಿಷಯದಲ್ಲಿ ಮಾತ್ರ ರಾಜ್ಯ-ಕೇಂದ್ರ ಎಂಬ ಬೇಧವಿಲ್ಲದೆ ಎರಡೂ ಸರ್ಕಾರಗಳದ್ದೂ ಸಮಪಾಲು. ಮಾನವ ಕುಲಕ್ಕೇ ವಿನಾಶಕಾರಿ ಎಂದು ಪದೇ ಪದೇ ಸಾಭೀತಾಗಿರುವ ಎಂಡೋಸಲ್ಫಾನ್ ಅನ್ನು ರಾಜ್ಯ ಸರ್ಕಾರ ಶಾಶ್ವತವಾಗಿ ನಿಷೇಧ ಮಾಡುವ ಬದಲು ಕೇವಲ ಎರಡು ತಿಂಗಳ ಅವಧಿಗೆ ಮಾತ್ರ ನಿಷೇಧಿಸಿದೆ. ನೆರೆಯ ರಾಜ್ಯ ಕೇರಳದಲ್ಲಿ ಎಂಡೋಸಲ್ಫಾನ್‌ನ ಭೀಕರತೆಯನ್ನು ಅರಿತು, ಕೇಂದ್ರದ ಮನವೊಲಿಸಿ ಅದನ್ನು ಶಾಶ್ವತವಾಗಿ ನಿಷೇಧಿಸುವಲ್ಲಿ ಅಲ್ಲಿನ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳು ಈ ವಿಷಯದಲ್ಲಿ ಸಂಘಟಿತ ಪ್ರಯತ್ನ ಮಾಡುತ್ತಿಲ್ಲ ಎಂಬ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ.
     ಈಗಾಗಲೆ ಸುಮಾರು ಎಪ್ಪತ್ತೆಂಟು ರಾಷ್ಟ್ರಗಳು ಎಂಡೋಸಲ್ಫಾನ್ ಬಳಕೆಯ ಮೇಲೆ  ನಿಷೇಧ ಹೇರಿವೆ. ಹೀಗಿರುವಾಗ ನಮಗೇಕೆ ಈ ಕೀಟನಾಶಕದ ಉಸಾಬರಿ? ಅದನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಪಕ್ಷಬೇಧ ಮರೆತು ಎಲ್ಲಾ ನಾಯಕರೂ ಕೈಜೋಡಿಸಬಾರದೇ? ಎಂಬ ನೊಂದವರ ಪ್ರಶ್ನೆಗೆ ಮುಖ ಕೊಟ್ಟು ಉತ್ತರ ನೀಡುವ ಪ್ರಯತ್ನವನ್ನು ಇದುವರೆಗೂ ಯಾವ ರಾಜಕಾರಣಿಗಳೂ ಮಾಡಿಲ್ಲ ಎಂಬುದು ವಿಪರ್ಯಾಸ. ಕೇವಲ ಎರಡು ತಿಂಗಳು ನಿಷೇಧ ಹೇರಿದ್ದಕ್ಕೇ ಎಂಡೋಸಲ್ಫಾನ್ ತಯಾರಕರು ರಾಜ್ಯ ಸರ್ಕಾರವನ್ನು ಕೋರ್ಟಿನ ಕಟಕಟೆಗೆ ಎಳೆದಿದ್ದಾರೆ. ನಮ್ಮ ಉತ್ವನ್ನದಿಂದ ಯಾರಿಗೂ ಹಾನಿ ಇಲ್ಲ ಎಂದು ಘಂಟಾಘೋಷವಾಗಿ ಕೂಗಿಕೊಳ್ಳುತ್ತಿದ್ದಾರೆ. ಇವರ ಮಾತು ಸುಳ್ಳು ಎಂಬುದನ್ನು ಸಾರಿ ಹೇಳುವ ಅದೆಷ್ಟೋ ಜೀವಗಳು ಇವತ್ತಿಗೂ ನಿಡ್ಲೆ, ಕೊಕ್ಕಡ, ಪಟ್ರಮೆ ಪ್ರದೇಶಗಳಲ್ಲಿ ಮೌನವಾಗಿ ರೋಧಿಸುತ್ತಿವೆ. ತಮ್ಮದಲ್ಲದ ತಪ್ಪಿಗೆ ನೋವು ತಿನ್ನುತ್ತಾ ನರಳುತ್ತಿವೆ. ಇವರೆಲ್ಲರ ಕಣ್ಣೀರಿಗೆ ಎಂಡೋಸಲ್ಫಾನ್‌ನ ಶಾಶ್ವತ ನಿಷೇಧದಿಂದ ಪರಿಹಾರ ದೊರಕುತ್ತದೆ ಎಂದರೆ ಅದು ಮೂರ್ಖತನವಾದೀತು. ಆದರೆ ಕೊಂಚ ಮಟ್ಟಿನ ಸಾಂತ್ವನವನ್ನಾದರೂ ನೀಡುತ್ತದೆ. ಎಂಡೋಸಲ್ಫಾನ್‌ಗೆ ಬಲಿಯಾದವರ ಬದುಕು ಮರಳಿಸಲಂತೂ ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಕೊನೆಯ ಪಕ್ಷ ಇದರ ಸಂಪೂರ್ಣ ನಿಷೇಧದ ಮೂಲಕ ಅವರಿಗೆ ಕೊಂಚ ನೆಮ್ಮದಿಯನ್ನಾದರೂ ನೀಡಬಾರದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ