ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಭಾನುವಾರ, ಏಪ್ರಿಲ್ 1

ನಾನು ಮತ್ತು ಕವನ !...

"ಅದೆಷ್ಟೋ ದಿನಗಳ ನಂತರ ಮತ್ತೆ ಬ್ಲಾಗು ಅಪ್ ಲೋಡ್ ಮಾಡಬೇಕಿನಿಸುತ್ತಿತ್ತು. ಇಷ್ಟುದಿನ ಟೈಮ್ ಇರಲಿಲ್ಲ ಅಂತ ಅಲ್ಲ ಯಾಕೋ ಜೀವನದ ಜಡ ನನ್ನನ್ನು ಹಾಗೆ ಮಾಡಿತ್ತು. ಆದರೂ ನಾನು ಬರಿಯುವುದನ್ನ ಬಿಟ್ಟಿರಲಿಲ್ಲ. ನನ್ನ ಮನಸಿನ ಜಡವೇ ನನ್ನನ್ನ ಅದಗಾಲೇ ತುಂಬ ಬರೆಸಿತ್ತು !. ಕವನಗಳು ಮತ್ತು ನಾನು ಬಹುದೂರ ಅಂತ ಅಂದುಕೊಂಡಿದ್ದೆ, ಆದರೂ ಕಳೆದ ದಿನಗಳಲ್ಲಿ ಬರದದ್ದು ಕವನಗಳೆ,  ನಾನಂತೂ ಕವನ ಅಂತಲೇ  ಅಂದುಕೊಂಡಿದ್ದೇನೆ( ಇದರ ಮೇಲೆ ನಿಮ್ಮ ಭಾವಕ್ಕೇ ಬಿಟ್ಟ ವಿಚಾರ). ಏನೋ ಎಲ್ಲಾ ಕವನವನ್ನು ಒಟ್ಟಿಗೇ ಹಾಕುತ್ತಿದ್ದೇನೆ". ಅಲೆಮಾರಿ

ಒಂಟಿ ಪಯಣ... ಹಾಳು ಭಾವ..

ಬಾಳ ದಾರಿಯ ಒಂಟಿ ಪಯಣಕೆ...
ಯಾಕೆ ಈ ಹಾಳು ಭಾವ
ನನ್ನದೆಂದಿಲ್ಲ , ನಿನ್ನದೆಂದಿಲ್ಲ...
ಇಲ್ಲಿ ಎಲ್ಲವೂ, ಎಲ್ಲವೂ ಎಲ್ಲರಿಗಾಗಿ...
ನನ್ನದೆಂದು ತಿಳಿದವನು...
ಬಯಸಿದವನು ಮೂರ್ಖ...

ಇವತ್ತು ನನ್ನವರೆಂದು ತಿಳಿದವರು...
ನಾಳೆ ಇನ್ನೊಬ್ಬರ ಸೊತ್ತು...
ಆದರೂ ಸಂಭ್ರಮದ ಸಂಭಂದಗಳಲ್ಲಿ...
ನಾವು ಇನ್ನೂ ಮುಳುಗಿದ್ದೇವೆ...
ಅವಳು ನನ್ನವಳು, ಅವನು ನನ್ನವನು
ಎನ್ನುತ್ತಾ ದಿನ ದೂಡುವೆವು...

ಈ ಹಾಳು ಭಾವ ಮಾತ್ರ ನೆನೆಯುತಿದೆ
ಬಾಳ ದಾರಿಯ ಒಂಟಿ ಪಯಣದಲಿ
ನಾ ಮೆಚ್ಚಿದವರಿಗೆ...ಪ್ರೀತಿಸಿದವರಿಗೆ...
ನಾನು ಮೆಚ್ಚಿಗೆಯೋ ಎಂದು ತಿಳಿಯದೆ...
ಆದರೂ ಸಾಗುತಿದೆ ಸುಂದರ ಪಯಣ...
ಅವರು ಮೆಚ್ಚಿರುವರೆಂದು ತಿಳಿದು...
ಅದೂ ಒಂಟಿ ಪಯಣ ಬಾಳ ದಾರಿಯ ದೂರಕೆ...

ಈ ಒಂಟಿ ಪಯಣ ಮಾತ್ರ ಅದ್ಭುತ...
ಸಾಗಿದಷ್ಟು ಮುಗಿಯದ ಪಯಣ...
ದೂರಕೆ...ದೂರಕೆ... ಎಲ್ಲೋ ಮುಂದಿರುವ
ಗುರಿಯಲ್ಲದ ಗುರಿಯ ಹುಡುಕ ಹೊರಟಂತೆ...
ಇಲ್ಲಿ ಅವನು ಮಿತ್ರನೇ...ಅವಳು ಗೆಳತಿಯೇ...

ಯಾಕೋ ಇಲ್ಲೇ ನಿಲ್ಲಿಸ ಬೇಕೆನಿಸುತ್ತಿದೆ...
ಕೆಲವೊಮ್ಮೆ ಜೀವನವೇ ಹಾಗೆ...
ಬೇಡ...ಬೇಡವೆಂದರೂ ಜಡವಾಗುತ್ತದೆ...


ನಿರ್ಮಲ ಪ್ರೀತಿ...

ಆ ಗೆಳೆಯನು ಈ ಕತೆಯನ್ನು ಹೇಳುವ ವರೆಗೂ...
ನಾನಿದ್ದೆ ಪ್ರೀತಿಯೆಂಬ ಸುಖದ ಸ್ವರ್ಗದಲಿ...
ನನ್ನಷ್ಟಕ್ಕೆ ನಾನು ಕಂಡುಕೊಂಡ ಪ್ರೀತಿಯ ಲಹರಿಯಲಿ...
ನಾನೊಬ್ಬನೆ ಕಂಡುಕೊಂಡ ಬಾವ ಸುಖದಲಿ...

ಆ ಮೊದಲ ಪ್ರೀತಿ ಅದೇನು ರೋಮಾಂಚನ!
ನಾವಿಬ್ಬರೆ ನೀಲಿ ಬಾನಿನ ಮೋಡಗಳಡೆಯಲಿ...
ಹೊಸ ಲೋಕದ ಹುಡುಕಾಟದ ತವಕದಲಿ...
ಅವಳ ಸುಂದರ ಕಣ್ಣಾಲಿಲೆಯಲ್ಲಿ ಮೂಡಿದ
ಸ್ವರ್ಗ ಸ್ವಪ್ನ...ಅದರೊಳಗಿನ ಹುಣ್ಣಿಮೆ ರಾತ್ರಿ...
ಮತ್ತೆ...ಮತ್ತೆ... ಬೇಕೆನಿಸುವ ಅವಳ
ಹೂವಿನಂತ ಹಸ್ತ... ಕಿರುಬೆರಳ ಸ್ಪರ್ಶ...
ಅಷ್ಟೇ ಸಾಕಿತ್ತು ನನಗೆ ಮೈ ಕೊಡವಲು...

ಮರುಳನೇ ನಾನು...ಮರುಳ...ಕಾಡಿದ
ಮೊದಲ ಪ್ರಣಯವನ್ನು ಹೇಳದೇ..
ಹೋದನೆಲ್ಲ ಕಾಡಿದವಳೊಡನೆ...ಅದೇಕೆ
ಈಗ ಕಾಡುತಿದೆ ಈ ಕವನದ ಸಾಲುಗಳಾಗಿ..
ಮತ್ತೆ ಹೇಳಬಹುದೇ ಎಂಬ ಭರವಸೆಯಿಂದ...
 ಅವಳೇಕೆ ಕಾಡಿದಳು ನನ್ನಂತ ಮುಗುದನನ್ನು...
ನಾನೇಕೆ ತಿಳಿಯದೇ ಪ್ರಿತಿಸಿದೆ...ಅದು...
ಮತ್ತೆ ಮತ್ತೆ ಬೇಕೆನಿಸುವಷ್ಟು...

ಇದು ಮೋಹವಲ್ಲ...ಮೋಸವಲ್ಲ...ಹೃದಯದಲ್ಲಿಯೇ
ಬೆಚ್ಚಗೆ ನಾನರಿಯದೇ ಮೂಡಿದ ಭಾವನುರಾಗ...
ಇಲ್ಲದಿದ್ದರೆ ಇಷ್ಟು ಕಾಡುತ್ತಿರಲಿಲ್ಲ ಈ ಭಾವ...
ಸುಂದರ ಕವನ ಬರೆಯುವಷ್ಟು...ಇನ್ನೆನಿದ್ದರೂ...
ಈ ಪ್ರೀತಿ...ಅನುಭವದ ಸುಂದರ ಸಾಲುಗಳು...
ಮರೆಯದ ನೆನಪಿನ ಪುಟದ ಸುಂದರ ಚಿತ್ರವಷ್ಟೆ...

ಆದರೂ ಆ ಸಂಜೆಗತ್ತಲು...ಮೋಹಕ ಲೋಕ
ಸ್ವರ್ಗ ಸ್ವಪ್ನ...ಹುಣ್ಣಿಮೆ ರಾತ್ರಿ...ಕಿರುಬೆರಳು...
ತೋಯಿಸುತಿದೆ ನನ್ನ ಮನಸ್ಸನ್ನು ಮತ್ತೆ...ಮತ್ತೆ...
ಒಂದೊಮ್ಮೆ ಈ ನೆನಪೇ ಎಲ್ಲಾ ಆಗಿತ್ತು...
ಈಗಲೂ ಹಾಗೆನೇ ಆದ್ರೆ ಕವನದಲ್ಲಷ್ಟೆ...

ಆ ಗೆಳೆಯನ ಒಲವಿನ ಕಥೆ...
ನನ್ನೊಲವಿನ ಚರಮ ಗೀತೆ...ಯಾಕೆಂದರೆ
ಅದು ನಾನೊಬ್ಬನೆ ಕಂಡುಕೊಂಡ ಪೆಚ್ಚು ಪ್ರೀತಿ...
ಈಗ ಅವಳೂ ಇದಾಳೆ...ನಾನೂ ಇದ್ದೇನೆ...
ಬರಿಯ ಅಲೆಯಲಿ...ಅವಳು...
ಪ್ರಿಯಕರನ ಮದುರ ಪ್ರೀತಿಯ ಅಲೆಯಲಿ...
ನಾನು ಈ ಹಚ್ಚು ಕವನದ ಅಲೆಯಲಿ...

ಅವಳದೂ ನಿರ್ಮಲ ಪ್ರೀತಿ...
ನನ್ನದೂ ಹೃದಯದಲ್ಲಿಯೇ ಮುಚ್ಚಿಟ್ಟ...
ನಿರ್ಮಲ...ನಿರ್ಮಲ...ಪ್ರೀತಿ...
ಅಂತೂ ಪ್ರೀತಿ ನಿರ್ಮಲ...ನಿರ್ಮಲ...
ಅದನ್ನು ಪ್ರಿತಿಸುವರ ಹೊರತಾಗಿ... 

ಹೇಳದ ಪ್ರೀತಿ...

ಆ ಬೆಳದಿಂಗಳ ರಾತ್ರಿಯಲಿ
ಮಲಗಿದ್ದೆ ಎಸುಳುಗಳ ಮುದುಡಿ
ಎಕೇ... ಬೀಸಿತೋ ಆ ಪೆಚ್ಚುಗಾಳಿ
ಅಷ್ಟೊಂದು ಸುಂದರ ಕನಸುಗಳೊಂದಿಗೆ

ನಾನೊಂದು ಸುಂದರ ಹೂವು...
ಮಕರಂದ ನನ್ನ ಜೀವ
ಪ್ರತಿದಿನ ನನ್ನ ಕಮಲ ದಳ
ಸುರಿಸುತ್ತಿತ್ತು ಸವಿಯ ಮಕರಂದ...

ಅಲ್ಲೇ ಹಾರುತ್ತಿದ್ದವು ಹಲವು ದುಂಬಿಗಳು
ಮಕರಂದ ಸವಿಗಾಗಿ...
ಆದರೆ ಅವುಗಳಿಗೆ ಬೇಕಿರಲಿಲ್ಲ ನನ್ನ ಸಿಹಿ
ಅದೊಂದು ಭೃಂಗ ಮಾತ್ರ ನನ್ನನ್ನೇ...
ಹರವುತ್ತಿತ್ತು ಮತ್ತೆ... ಮತ್ತೆ... ಸವಿಗಾಗಿ

ಅಂದು ಕೊಂಡಿದ್ದೆ ನಾನು ಹಾಗೆ ಸುಮ್ಮನೇ
ಅದು ನನ್ನದೇ... ದುಂಬಿಯೆಂದು...
ನನ್ನ ಸ್ವಂತದೆಂದು॒
ಅದಕ್ಕಾಗಿಯೇ ಸುರಿಸುತ್ತಿದ್ದೆ ಹೆಚ್ಚು... ಹೆಚ್ಚು..
ಮಕರಂದವನ್ನ... ಮತ್ತೆ ನನ್ನರಸಿ ಬರಲೆಂದು...

ಹೇಳಬೇಕೆಂದಿದ್ದೆ, ಆ ತಂಪಿನ ಮುಂಜಾವಿನಲ್ಲಿ
ಹನಿಗಳ ಮೃದು ಶಬ್ದಗಳೆಡೆಯಲಿ, ಆ ಮಬ್ಬಿನಲಿ
ಈ ಹೂವು ನಿನ್ನದೇ... ನಿನ್ನ ಸ್ವಂತದ್ದು...
ಇಲ್ಲಿಯ ಮಕರಂದವೂ ನಿನಗಾಗಿಯೇ ನಿನಗೆ ಮಾತ್ರ

ಅಷ್ಟರಲ್ಲಿಯೇ ಮುಗಿದಿತ್ತು ನನ್ನ ಪೆಚ್ಚು ಕನಸು
ನಾನಿದ್ದೆ ಯಜಮಾನನ ಹೂವಿನ ತಟ್ಟೆಯಲಿ
ಮಬ್ಬು... ಮಬ್ಬು... ನೆನಪಿನಲಿ
ದುಂಬಿಯನ್ನು ಕಾಯುತ್ತ... ಹೇಳಿ ಹೋಗಲು...

ದುಂಬಿಯೇನೋ... ಬಂದಿತ್ತು , ಅಂತ ನೆನಪು
ಆದರೆ ಅದು ನನ್ನ ತಡಕಾಡಲಿಲ್ಲ...
ನನ್ನ ಮಕರಂದ ಇಲ್ಲವೆಂದು ಹಾತೊರೆಯಲಿಲ್ಲ
ಹಾರಿತು ನೇರವಾಗಿ ಇನ್ನೊಂದು ಸುಂದರ ಹೂವಿನೆಡೆಗೆ
ಮಕರಂದ ಸವಿಗಾಗಿ... ಸವಿಗಾಗಿ...

ಇದೆಲ್ಲವೂ  ಮಬ್ಬು... ಮಬ್ಬು... ಯಾಕೆಂದರೆ
ನಾನಗಲೇ ಮಣ್ಣಲ್ಲಿ ಮಣ್ಣಾಗಿದ್ದೆ...
ಸುಂದರ ಕನಸಿನೊಂದಿಗೆ..
.ಹೇಳದ ಪ್ರೀತಿಯೊಂದಿಗೆ...

ಅಲೆಮಾರಿ  ಪ್ರೀತಿ

ನಾನೀಗ ಗೂಡಿಲ್ಲದ ಅಲೆಮಾರಿ ಹಕ್ಕಿ...
ರಾಜ್ಯವಲ್ಲದ...ರಾಜ್ಯದಿಂದ
ಹಾರಿಬಂದ ಮೂಖ ಹಕ್ಕಿ...

ಯಾವತ್ತೋ... ಹಾರಬೇಕಿತ್ತು ನಾನು...
ಅದ ಮರೆತು ಕಟ್ಟದೆ ನಾನು...
ನನ್ನದೇ ಒಲವಿನ ಗೂಡು...
ಎಂದೂ ಸಿಗದ ಒಲವಿನ ಗೂಡು...

ನನ್ನಷ್ಟಕ್ಕೆ ನಾನು ಎಷ್ಟು ಕಟ್ಟಿದರೂ...
ನಾನೊಬ್ಬ ಅಲೆಮಾರಿ ಹಕ್ಕಿ...
ಹಾಗಂತ ಗೂಡು ಮರೆತು...
ಹಾರಲೇ... ಒಂದೇ ಸಮನೆ...
ಹಾರಲೇನು, ಅಲೆಮಾರಿದು ಪ್ರಿತಿಯಲ್ಲವೇ?...

ಮೌನ ಮಾತು...

ಮೌನಿಯಾಗ ಬೇಡ ನೀನು...
ನಿನ್ನ ಮೌನ ಕಾಡುತಿದೆ ಮನವ...
ಜಗವ ನಗಿಸುವ ನಿನ್ನ ನಗು...
ಮುಗಿಯ ಬಾರದು ಇರುವ ತನಕ...

ಮೌನ ಯಾಕೆ ಹೀಗೆ? ಕಾಡುವಷ್ಟು...
ನೀ ಮೌನಿ ಹೌದು! ಕಾಡಬೇಡ ಮೌನದಿಂದ...
ಜಗವೇ ಹೀಗೆ...ನೋವು ನಲಿವುಗಳ ಗೂಡು...
ಓಡೋ...ಕಾಲವೇ ಹಾಗೆ ಚೆಂದ...
ಬಯಸುತ್ತೆ... ನೋವನ್ನು ಮತ್ತೆ...ಮತ್ತೆ...

ನೋವು ನಲಿವುಗಳ ಗೆಲ್ಲಬೇಕು ನೀ...
ಸೋತಾಗ ನೋಡು ನೀ ನನ್ನನ್ನೇ...
ಗೆದ್ದಾಗ ಸಂಭ್ರಮಿಸು ನನ್ನೊಂದಿಗೆ...
ಬಯಸು ನೋವು ನಲಿವನ್ನು ಸಮದಿಂದ...
ನಗಿಸು ಜಗವ ನಿನ್ನ ನಗುವಿಂದ...

ಹೌದು! ಮೌನವೇ... ಉತ್ತರ ವಿಲಕ್ಷಣಗಳಿಗೆ...
ಆದರೆ ಮೌನವೇಕೋ ಕಾಡುತಿದೆ ನನ್ನ ಪ್ರೀತಿಗೆ...
ಕಾಡಿಸಬೇಡ ಮೌನದಿಂದ ನನ್ನನ್ನ...ಮತ್ತೆ...ಮತ್ತೆ..
ಗೆಲ್ಲು ನಿನ್ನ ಮೌನವ ನಗುವಿನಿಂದ...
ಎಂದಿಗೂ ಮೌನಿಯಾಗ ಬೇಡ...
ಅಷ್ಟು ಕಾಡುವಷ್ಟು... ನೋಯುವಷ್ಟು...
ಅಲೆಮಾರಿ

ಶನಿವಾರ, ಮೇ 14

ಹುಚ್ಚು ಮನಸ್ಸಿನ… ಹತ್ತು ಬಾವ…

"ಈ ಮನಸ್ಸೆ ಹಾಗೆ ಇಂಟರನೆಟ್ ಪೇಜ್ ಇದ್ದ ಹಾಗೆ ಕೆಲವೊಮ್ಮೆ ವೇಗವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತದೆ, ಮತ್ತೊಮ್ಮೆ ಅಲ್ಲೆ ಸ್ಟ್ರಕ್ ಆಗಿಬಿಡುತ್ತದೆ. ಕೆಲವೊಮ್ಮೆ ನಾವೆಷ್ಟು ಅಡ್ರಸ್ ಹಾಕಿದ್ರು ಅದು ಹುಡುಕಾಡುವುದಿಲ್ಲ, ಬದಲಾಗಿ ಬೇರೆಯದೆ ವಿಷಯಕ್ಕೆ ಹಾತೊರೆಯುತ್ತಿರುತ್ತದೆ. ಬಹುಷ ಮನುಷ್ಯನ ಮನಸ್ಸಿನಷ್ಟು ಚಂಚಲ ಇನ್ನೊಂದಿಲ್ಲ. ಅಂತಹ ಚಂಚಲ ಮನಸ್ಸಿನ ಬಾವನೆಗಳು ಬರವಣಿಗೆಯಲ್ಲಿ ಮೂಡಿದಾಗ ಅದು ಕವಿತೆಯಾದದ್ದು ಹೀಗೆ"... 


                          
ಓ..ಮನಸ್ಸೇ.. ಹೇಳು ನಿನ್ನ ಕಲ್ಪನೆಯ ಭಾವವೇನು...
ಆಸೆಗಳು ಗರಿಬಿಚ್ಚಿ ಹಾರುತಿದೆ,ಕಾಲ ಚಲಿಸುತಿದೆ...
ಆವತ್ತು ನೀ ಹೋಗು ಅಲ್ಲಿಗೆ ಅಂದೆ...
ಹೋದೆ ನಿನ್ನ ಮಾತಕೇಳಿ..ಆಸೆಯ ಹಂದರದೊಂದಿಗೆ..
ಮತ್ತೊಮ್ಮೆ,ಬಾ ಅಂದೆ..ಬಂದೆ ನಿನ್ನ ಅಸೆಯಂತೆ...
ಇವತ್ತು ಮತ್ತೆ ಅಲ್ಲಿ ಹೋಗು ಅನ್ನುವೆಯಾ ಅಂತರಾತ್ಮವೆ...
                                               ತಿಳಿಸು ನಿನ್ನ ಬಾವವೇನು...

ಗರಿಬಿಚ್ಚಿದ ಹಕ್ಕಿಯಂತೆ ಹೋದೆ ಅಲ್ಲಿಗೆ...
ಕನಸ ಕಂಡೆ,ಕಟ್ಟಿದೆ ಕಲ್ಪನೆಯ ಸೌದವನ್ನೆ...
ಹಾರುವ ಭರದಲ್ಲಿ ಮರೆತಿದ್ದೆ ವಾಸ್ತವದ ಸತ್ಯವನ್ನೆ...
ಅಷ್ಟರಲ್ಲೆ ಮುರಿದಿತ್ತು ಕಲ್ಪನೆಯ ಸೌದ...
ಕರೆದೆ ನೀನು...ಮರಳಿ ಬಾ ಎಂದು...
ಬಂದೆ ನಿನ್ನ ಒಲವಿನ ಕರೆಗೆ ಓ ಗೊಟ್ಟು...
                      ತಿಳಿಸು ನಿನ್ನ ಬಾವವೇನು...

ಅಂತರಾತ್ಮವೇ ಈಗಲಾದರು ಹೇಳು...
ನಿನ್ನ ಆತ್ಮ ಸತ್ಯವನ್ನಭಾವ ಸಾರವನ್ನ...
ಕಟ್ಟಿದೆ...ಮುರಿದ ಕಲ್ಪನೆಯ ಸೌದವನ್ನು...
ಅನುಭವದ ಸೆಲೆಯೊಂದಿಗೆ...ಅರಿವಿನ ಬಣ್ಣದೊಂದಿಗೆ...
ಸೌದವೀಗ ಆಗಿದೆ ಅರಮನೆ...
ಅಲ್ಲಿ ಬೆಳಗುತಿದೆ ಜ್ಞಾನ ದೀಪ...
ಆದರೂ ನೀನು ಮತ್ತೆ ಇನ್ನೆಲ್ಲಿಯೋ ಹೋಗು ಅನ್ನುವೆಯಾ...
                                       ತಿಳಿಸು ನಿನ್ನ ಬಾವವೇನು...

ಸೋಮವಾರ, ಮಾರ್ಚ್ 21

ಮನ ಕದಡುವ ಕಂದಹಾರ್; ಇದು ದೇಶಪ್ರೇಮಿಗಳ ಕಥನ

            ’ಕಂದಹಾರ್’ ಇದೊಂದು ಉತ್ತಮ ದೇಶಪ್ರೇಮ ವಾಸನೆಯುಳ್ಳ ಚಿತ್ರ. ತೆರೆಗೆ ತೆರೆದುಕೊಳ್ಳುವ ಮೊದಲೇ ಬಹಳಷ್ಟು ಚರ್ಚೆಯಾದ ಮಲೆಯಾಳಿ ಚಿತ್ರ. ಸದಾ ಹೊಸತನವನ್ನು ಹುಡುಕುವ ಮಲೆಯಾಳಿ ಚಿತ್ರಗಳಲ್ಲಿ ಇದು ಒಂದು. ಈ ಚಿತ್ರದ ಪ್ರಮುಖ ಆಕರ್ಷಣೆಯೆಂದರೆ ಇದರ ಕಥಾಹಂದರ, ಮತ್ತು ನಾಯಕರು. ಭಾರತೀಯ ಚಿತ್ರ ಜಗತ್ತಿನ ದಿಗ್ಗಜರಾದ ಮೋಹನ್ ಲಾಲ್ ಹಾಗೂ ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸಿರುವುದು ಚಿತ್ರದ ಮತ್ತೊಂದು ಆಕರ್ಷಣೆ. ಅದರಲ್ಲಿಯೂ ಅಮಿತಾಬ್ ನಟಿಸುತ್ತಿರುವ ಮೊದಲ ಮಲೆಯಾಳಿ ಚಿತ್ರ.
        ಹಲವು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ನಡೆದ ಕಂದಹಾರ್ ವಿಮಾನ ಅಪಹರಣದ ನೈಜ ಘಟನೆಯನ್ನು ಮುಖ್ಯ ಕಥಾವಸ್ತುವಾಗಿರಿಸಿಕೊಂಡು, ಭಯೋತ್ಪಾದನೆಯ ವಿವಿಧ ಮಜಲುಗಳನ್ನು ಈ ಚಿತ್ರ ಸವಿವರವಾಗಿ ಹೇಳುತ್ತದೆ. ಸೇನೆಯಲ್ಲಿ ಮೇಜರ್ ಆಗಿದ್ದ ರವಿಯವರು ಕಂದಹಾರ್‌ನ ಕಥೆಯನ್ನ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ನಿರ್ದೇಶನದಲ್ಲಿ ರವಿ ಸೈ ಎನಿಸಿದ್ದಾರೆ. ಮೋಹನಲಾಲ್ ಮತ್ತು ರವಿ ಜೊತೆಯಾಗಿ ಮಾಡುತ್ತಿರುವ ಮೂರನೆಯ ಚಿತ್ರವಿದು. ಈ ಮೂರು ಚಿತ್ರಗಳು ದೇಶಪ್ರೇಮಕ್ಕೆ ಸಂಬಧಿಸಿದ ಚಿತ್ರಗಳು ಎನ್ನುವುದು ವಿಶೇಷ.
    ಸ್ವತಃ ಮೋಹನ್ ಲಾಲ್, ಸುನಿಲ್ ಸಿ ನಾಯರ್‌ರೊಂದಿಗೆ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಅಮಿತಾಬ್ ಇಲ್ಲಿ ಲೋಕ್‌ನಾಥ್ ಶರ್ಮ ಎಂಬ ಮೇಷ್ಟರ ಪಾತ್ರವನ್ನು ನಿರ್ವಹಿಸಿದ್ದು, ಭಾಷೆ ಬೇರೆಯಾ ದರೂ ತನ್ನ ನೈಜ ಅಭಿನಯಕ್ಕೆ ಕೊಂಚವೂ ಕೊರತೆಯಿಲ್ಲದೆ ಅಭಿನಯಿಸಿದ್ದಾರೆ. ಮೇಜರ್ ಮಹಾದೇವನ್ ಪಾತ್ರದಲ್ಲಿ ಮೋಹನ್ ಲಾಲ್ ಮನೋಜ್ಞವಾಗಿ ನಟಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
     ಸುಮಾರು ೬ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಊಟಿ, ದೆಹಲಿ, ರಷ್ಯ ಮುಂತಾದೆಡೆಗಳಲ್ಲಿ ಚಿತ್ರೀಕರಣಗೊಂಡಿದೆ. ಶಮೀರಾ ಟಂಡನ್ ಸಂಗೀತ ತಕ್ಕಮಟ್ಟಿಗೆ ಇಂಪಾಗಿದೆ. ಖ್ಯಾತ ಕ್ಯಾಮರಮ್ಯಾನ್ ರವಿವರ್ಮ ತನ್ನ ಕೈ ಚಳಕವನ್ನು ಚಿತ್ರದುದ್ದಕ್ಕೂ ತೋರಿಸಿದ್ದು ಎಲ್ಲಿಯೂ ಅತಿಯೆನಿಸದ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ, ಒಟ್ಟಿನಲ್ಲಿ ಪ್ರತಿ ಚಿತ್ರದಲ್ಲಿ ಹೊಸತನವನ್ನು ಬಯಸುವ ಪ್ರೇಕ್ಷಕರಿಗೆ ನಿರ್ದೇಶಕರು ಮೋಸಮಾಡದೆ ಸದಭಿರುಚಿಯ ಚಿತ್ರವನ್ನೇ ನೀಡಿದ್ದಾರೆ.
 ಎಲ್ಲರಲ್ಲು, ಅದರಲ್ಲೂ ಯುವಪೀಳಿಗೆಯಲ್ಲಿ   ದೇಶಪ್ರೇಮ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಇಂತಹ ಚಿತ್ರ ತಯಾರಿಸಿ ಅವರನ್ನು ದೇಶ ಪ್ರೇಮದೆಡೆಗೆ ಚಿಂತಿಸುವಂತೆ ಮಾಡಿದ ಚಿತ್ರತಂಡದ ಕಾರ್ಯ ಶ್ಲಾಘನೀಯ. ಖಂಡಿತವಾಗಿಯೂ ನೀವೂ ಕೂಡ ಒಮ್ಮೆ ಈ ಚಿತ್ರ ನೋಡಿ ದೇಶಪ್ರೇಮ ಹೆಚ್ಚಿಸಿಕೊಳ್ಳಿ.

ಸೋಮವಾರ, ಮಾರ್ಚ್ 7

ಕೊನೆಯೇ ಇಲ್ಲದ ದುರಂತ ಕಥೆ...

ಇದು ದುರಂತಮಯ ಬದುಕಿನ ಕಟು ಸತ್ಯ... ವೈದ್ಯ ಲೋಕಕ್ಕೆ ಸವಾಲಾಗಿರುವ ವಿಚಿತ್ರ ರೋಗಗಳ ಆಗರ. ಹಾಗಂತ ಇದು ಪ್ರಕೃತಿ ನಿರ್ಮಿತ ಸಮಸ್ಯೆಯಲ್ಲ.  ಬದಲಾಗಿ ಮಾನವನ ಅತೀ ಬುದ್ದಿವಂತಿಕೆಯಿಂದಾದ ಒಂದು ದೊಡ್ಡ ದುರಂತ. ಆದ್ದರಿಂದಲೇ ಇದಕ್ಕೆ ಪರಿಹಾರವಿಲ್ಲದೆ ಇಂದಿಗೂ ಜೀವಂತವಾಗಿರುವುದು. ಇಲ್ಲಿ ಕಣ್ಣೀರಿಡುವ ತಾಯಂದಿರು,   ಮಾತನಾಡಲಾಗದ ಅಶಕ್ತ ಮಕ್ಕಳು, ಬುದ್ಧಿ-ದೇಹ ಸ್ವಾಧೀನವಿಲ್ಲದೆ ನರಳುತ್ತಿರುವವರು, ಸಮಾಜದಲ್ಲಿ ಎಲ್ಲರಂತೆ ಬಾಳಬೇಕೆನ್ನುವ ಆಸೆ ಇದ್ದರೂ ಬದುಕಲೊಂದೂ ಬಾಳೂ ಇಲ್ಲದೆ ಕೊರಗುತ್ತಿರುವವರೂ ಹೀಗೇ ನೋವಿನ ಮಡುವಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಅದೆಷ್ಟೋ ಜೀವಗಳಿವೆ. ಇದಕ್ಕೆಲ್ಲಾ ಕಾರಣ ’ಎಂಡೋಸಲ್ಫಾನ್’.
      ಅದು ೧೯೮೩ನೇ ಇಸವಿ. ಏನೂ ಅರಿಯದೇ ನಿಶ್ಚಿಂತೆಯಿಂದ ಜೀವಿಸುತ್ತಿದ್ದ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಕೆಲವು ಗ್ರಾಮಗಳ ನಿವಾಸಿಗಳಿಗೆ ಮುಂದೆ ಇಂತಹದೊಂದು ದುರಂತ ಬಂದೊದಗುತ್ತದೆ ಎಂಬ ಕನಸೂ ಬಿದ್ದಿರದ ದಿನಗಳವು. ಆದರೆ ಅದೇ ಸಮಯದಲ್ಲಿ ಗೇರುಬೀಜ ಕೃಷಿಗೆ ಬರುವಂತಹ ಕೀಮೊಸ್ಕ್ಯೊಟೋ ಎಂಬ ಸೊಳ್ಳೆಯನ್ನು ಹೋಗಲಾಡಿಸಲು ’ಗೇರು ಅಭಿವೃದ್ಧಿ ನಿಗಮ’ ಹೆಲಿಕಾಫ್ಟರ್ ಮೂಲಕ ಎಂಡೋಸಲ್ಫಾನ್ ಕೀಟನಾಶಕವನ್ನು ಅವ್ಯಾಹತವಾಗಿ ಸಿಂಪಡಿಸುತ್ತಿತ್ತು. ಅಲ್ಲಿಂದ ಮುಂದೆ ಆದದ್ದೆಲ್ಲಾ ದುರಂತಗಳ ರೌದ್ರನರ್ತನ. ಇದ್ದಕ್ಕಿದ್ದಂತೆ ಕೇರಳದ ಕಾಸರಗೋಡಿನ ಕೆಲವು ಗ್ರಾಮಗಳು, ದಕ್ಷಿಣ ಕನ್ನಡದ ಕೊಕ್ಕಡ, ಪಟ್ರಮೆ, ನಿಡ್ಲೆ ಪ್ರದೇಶದಲ್ಲಿ ಸಣ್ಣವರು ದೊಡ್ಡವರು ಎಂಬ ಬೇಧವಿಲ್ಲದೆ ೨೫೦ಕ್ಕೂ ಅಧಿಕ ಮಂದಿ ಕ್ಯಾನ್ಸರ್, ಮಾನಸಿಕ ವಿಕಲತೆಗಳಂತಹ ವಿಲಕ್ಷಣ ರೋಗಗಳಿಗೆ ತುತ್ತಾದರು. ಅಚಾನಕ್ಕಾಗಿ ಕಾಣಿಸಿಕೊಂಡ ಈ ವಿಪ್ಲವದ ಮೂಲ ಹುಡುಕ ಹೊರಟಾಗ ಹೊರಬಿದ್ದ ಹೆಸರು ’ಎಂಡೋ ಸಲ್ಫಾನ್’.
        ಈ ವ್ಯಥೆ ಇಷ್ಟಕ್ಕೇ ನಿಲ್ಲಲಿಲ್ಲ. ಅದಾಗಲೇ ಅರ್ಧ ಬದುಕು ಸವೆಸಿ ವ್ಯಾಧಿಗೆ ತುತ್ತಾದವರು ಸಾಲದು ಎಂಬಂತೆ ಎಂಡೋ ಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳ ಬದುಕಲ್ಲಂತೂ ಸಂಪೂರ್ಣ ಕತ್ತಲು. ಅಂಗವಿಕಲ, ಬುದ್ಧಿ ಮಾಂದ್ಯ ಮಕ್ಕಳ ಸರಣಿಯೇ ಬೆಳೆಯಿತು. ಕಳೆದ ಇಪ್ಪತ್ತು ವರ್ಷಗಳಿಂದ, ಅದೆಷ್ಟೋ ತಾಯಂದಿರು ಸಮಾಜದೆದುರು ನಗುತ್ತಿದ್ದರೂ ಒಳಗೊಳಗೇ ದುಖಃದ ಬೇಗೆಯಲ್ಲಿ ಬೆಂದು ಹೋಗಿದ್ದಾರೆ. ಈ ನಡುವೆ ಆರಿ ಹೋದ ಅದೆಷ್ಟೋ ಬಡಕುಟುಂಬಗಳ ಜೀವನದ ಆಸರೆಯನ್ನು ಲೆಕ್ಕವಿಡುವವರಂತೂ ಇರಲೇ ಇಲ್ಲ. ಇದು ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭಸಿದಂತಲ್ಲವೇ.
ಹೋಗಲಿ... ಆಗಿದ್ದು ಆಗಿ ಹೋಯಿತು. ಆದ ತಪ್ಪಿಗೆ ಪ್ರಾಯಶ್ಚಿತ್ತ ಎನ್ನುವಂತೆ ಸರ್ಕಾರ ಆ ಬಡಕುಟುಂಬಗಳಿಗೆ ಹಲವು ಬಾರಿ ಉಚಿತ ವೈದಕೀಯ ಶಿಬಿರಗಳನ್ನು ಏರ್ಪಡಿಸಿತು. ಆದರೇನು ಪ್ರಯೋಜನ? ವೈದ್ಯರು ಬರುತ್ತಿದ್ದರು, ಒಂದೆರಡು ಜನಗಳಿಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದರು. ಆ ನಂತರ ರೋಗಿಯ ಸ್ಥಿತಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನ ಯಾರಿಗೂ ಇಲ್ಲ. ಇದರಿಂದ ಬೇಸತ್ತ ಜನ ಕಡೆ ಕಡೆಗೆ ಈ ಶಿಬಿರಗಳ ಮೇಲೆ ನಂಬಿಕೆಯನ್ನೇ ಕಳಕೊಂಡರು. ಇನ್ನು ಈ ಪ್ರದೇಶದ ನಿರಾಶ್ರಿತರಿಗೆ ಪರಿಹಾರ ಕೊಡಿಸುವುದಕ್ಕಾಗಿ ಎಂಡೋಸ್ಫಲಾನ್ ನಿರಾಶ್ರಿತರ ಅಧ್ಯಕ್ಷ ಶ್ರೀಧರ್ ಎಪ್ಪತ್ತೆರಡು ಬಾರಿ ವಿಧಾನ ಸೌಧದ ಮೆಟ್ಟಿಲು ಹತ್ತಿ ಇಳಿದಿದ್ದಾರೆ. ಬಹುಷಃ ಇದೊಂದು ದಾಖಲೆಯೇ ಆಗಿರಬಹುದು.
         ಇಷ್ಟೆಲ್ಲಾ ಪ್ರಯತ್ನದ ನಂತರ, ಪ್ರಸಕ್ತ ಸರಕಾರ ಎಂಡೋಸ್ಫಲಾನ್ ನಿರಾಶ್ರಿತರಿಗೆ ತಲಾ ಐವತ್ತು ಸಾವಿರ ರೂಪಾಯಿಗಳ ಪರಿಹಾರ ನೀಡಲು ಸಮ್ಮತಿಸಿ, ಕೊನೆಗೂ ಅದನ್ನು ನೊಂದವರ ಕೈದಾಟಿಸಿತು. ವಿಚಿತ್ರವೆಂದರೆ ಆ ನಂತರ ಒಬ್ಬನೇ ಒಬ್ಬ ರಾಜಕಾರಣಿಯೂ ಇತ್ತ ಕಡೆ ತಲೆ ಹಾಕಿ ಮಲಗಿಲ್ಲ. ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆಯೋ? ಇಲ್ಲವೋ? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಇದೀಗ ಮತ್ತೊಮ್ಮೆ ಜನರ ಕಣ್ಣಿಗೆ ಮಣ್ಣೆರಚಲು ಸರ್ಕಾರಗಳು ಸಜ್ಜಾಗಿವೆ. ಈ ವಿಷಯದಲ್ಲಿ ಮಾತ್ರ ರಾಜ್ಯ-ಕೇಂದ್ರ ಎಂಬ ಬೇಧವಿಲ್ಲದೆ ಎರಡೂ ಸರ್ಕಾರಗಳದ್ದೂ ಸಮಪಾಲು. ಮಾನವ ಕುಲಕ್ಕೇ ವಿನಾಶಕಾರಿ ಎಂದು ಪದೇ ಪದೇ ಸಾಭೀತಾಗಿರುವ ಎಂಡೋಸಲ್ಫಾನ್ ಅನ್ನು ರಾಜ್ಯ ಸರ್ಕಾರ ಶಾಶ್ವತವಾಗಿ ನಿಷೇಧ ಮಾಡುವ ಬದಲು ಕೇವಲ ಎರಡು ತಿಂಗಳ ಅವಧಿಗೆ ಮಾತ್ರ ನಿಷೇಧಿಸಿದೆ. ನೆರೆಯ ರಾಜ್ಯ ಕೇರಳದಲ್ಲಿ ಎಂಡೋಸಲ್ಫಾನ್‌ನ ಭೀಕರತೆಯನ್ನು ಅರಿತು, ಕೇಂದ್ರದ ಮನವೊಲಿಸಿ ಅದನ್ನು ಶಾಶ್ವತವಾಗಿ ನಿಷೇಧಿಸುವಲ್ಲಿ ಅಲ್ಲಿನ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳು ಈ ವಿಷಯದಲ್ಲಿ ಸಂಘಟಿತ ಪ್ರಯತ್ನ ಮಾಡುತ್ತಿಲ್ಲ ಎಂಬ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ.
     ಈಗಾಗಲೆ ಸುಮಾರು ಎಪ್ಪತ್ತೆಂಟು ರಾಷ್ಟ್ರಗಳು ಎಂಡೋಸಲ್ಫಾನ್ ಬಳಕೆಯ ಮೇಲೆ  ನಿಷೇಧ ಹೇರಿವೆ. ಹೀಗಿರುವಾಗ ನಮಗೇಕೆ ಈ ಕೀಟನಾಶಕದ ಉಸಾಬರಿ? ಅದನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಪಕ್ಷಬೇಧ ಮರೆತು ಎಲ್ಲಾ ನಾಯಕರೂ ಕೈಜೋಡಿಸಬಾರದೇ? ಎಂಬ ನೊಂದವರ ಪ್ರಶ್ನೆಗೆ ಮುಖ ಕೊಟ್ಟು ಉತ್ತರ ನೀಡುವ ಪ್ರಯತ್ನವನ್ನು ಇದುವರೆಗೂ ಯಾವ ರಾಜಕಾರಣಿಗಳೂ ಮಾಡಿಲ್ಲ ಎಂಬುದು ವಿಪರ್ಯಾಸ. ಕೇವಲ ಎರಡು ತಿಂಗಳು ನಿಷೇಧ ಹೇರಿದ್ದಕ್ಕೇ ಎಂಡೋಸಲ್ಫಾನ್ ತಯಾರಕರು ರಾಜ್ಯ ಸರ್ಕಾರವನ್ನು ಕೋರ್ಟಿನ ಕಟಕಟೆಗೆ ಎಳೆದಿದ್ದಾರೆ. ನಮ್ಮ ಉತ್ವನ್ನದಿಂದ ಯಾರಿಗೂ ಹಾನಿ ಇಲ್ಲ ಎಂದು ಘಂಟಾಘೋಷವಾಗಿ ಕೂಗಿಕೊಳ್ಳುತ್ತಿದ್ದಾರೆ. ಇವರ ಮಾತು ಸುಳ್ಳು ಎಂಬುದನ್ನು ಸಾರಿ ಹೇಳುವ ಅದೆಷ್ಟೋ ಜೀವಗಳು ಇವತ್ತಿಗೂ ನಿಡ್ಲೆ, ಕೊಕ್ಕಡ, ಪಟ್ರಮೆ ಪ್ರದೇಶಗಳಲ್ಲಿ ಮೌನವಾಗಿ ರೋಧಿಸುತ್ತಿವೆ. ತಮ್ಮದಲ್ಲದ ತಪ್ಪಿಗೆ ನೋವು ತಿನ್ನುತ್ತಾ ನರಳುತ್ತಿವೆ. ಇವರೆಲ್ಲರ ಕಣ್ಣೀರಿಗೆ ಎಂಡೋಸಲ್ಫಾನ್‌ನ ಶಾಶ್ವತ ನಿಷೇಧದಿಂದ ಪರಿಹಾರ ದೊರಕುತ್ತದೆ ಎಂದರೆ ಅದು ಮೂರ್ಖತನವಾದೀತು. ಆದರೆ ಕೊಂಚ ಮಟ್ಟಿನ ಸಾಂತ್ವನವನ್ನಾದರೂ ನೀಡುತ್ತದೆ. ಎಂಡೋಸಲ್ಫಾನ್‌ಗೆ ಬಲಿಯಾದವರ ಬದುಕು ಮರಳಿಸಲಂತೂ ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಕೊನೆಯ ಪಕ್ಷ ಇದರ ಸಂಪೂರ್ಣ ನಿಷೇಧದ ಮೂಲಕ ಅವರಿಗೆ ಕೊಂಚ ನೆಮ್ಮದಿಯನ್ನಾದರೂ ನೀಡಬಾರದೆ?

ಶನಿವಾರ, ಫೆಬ್ರವರಿ 19

ಆದರ್ಶ ನಾಯಕನಿಗಾಗಿ ಕಾಯುತಿದೆ ಭಾರತ..

ಇದು ನಮ್ಮ ದೇಶದ ದುರಂತವೊ..ಅಥಾವ ಒಳ್ಳೆಯದೊ ಗೊತ್ತಿಲ್ಲ ಅದೆಲ್ಲಾ ಭಾರತಾಂಬೆಯ ಮಕ್ಕಳಿಗೆ ಬಿಟ್ಟ ವಿಚಾರ.ಆದರೆ ಇದಂತೂ ಕಟು ಸತ್ಯ.ನಿಮ್ಮೆಗೆಲ್ಲಾ ಗೊತ್ತಿರುವ ಹಾಗೆ ಇದೀಗ ಇಡೀಯ ನಮ್ಮ ದೇಶ,ಈಗ ತಾನೆ ಆಟ ಮುಗಿಸಿದ ರಂಗಸ್ಥಳದಂತಾಗಿದೆ.ಪ್ರಸ್ತುತ ಎಲ್ಲಡೆ ಪುನರ್ ಮನನದ ಕಾಲ,ಹೀಗಾಯಿತು,ಹಾಗಗಬಾರದಿತ್ತು,ಹೀಗಾಗ ಬೇಕಿತ್ತು, ಎಂದು ಎಲ್ಲರೂ,ಎಲ್ಲೆಲ್ಲೂ,ಮಾತನಾಡಿಕೊಳ್ಳುತ್ತಿರುವುದು ಸಾಮನ್ಯ.ಕಳೆದ ಹಲವು ತಿಂಗಳಿನಿಂದ ರಾಜ್ಯ,ರಾಷ್ಟ್ರಮಟ್ಟದಲ್ಲಿ ಹಗರಣ,ಭ್ರಷ್ಟಚಾರದ್ದೆ ಕಾರ್‌ಬಾರ್,ಭೂಹಗರಣ,ಸ್ಪೆಕ್ಟ್ರಮ್,ಆದರ್ಶ ಹಗರಣ ಹೀಗೆ ಹಲಾವರು.ಆದರೆ ಈ ನಡುವೆ ಬಡವವಾದ್ದು ದೇಶ,ಹೋದದ್ದು ಜನರ ನಂಬಿಕೆ.

ಸರಿದ ಹಲವು ದಿನಗಳು ಭಾರತಕ್ಕೆ ಶನಿಕಾಟವಿದ್ದ ದಿನಗಳು,ಆ ದಿನಗಳೆಲ್ಲಾ ಸತ್‌ಪ್ರಜೆಗಳಾದ ನಾವು ’ಸತ್ತ’ಪ್ರಜೆಗಳಾಗಿ ಹಲವು ಕೆಟ್ಟ ವಿಚಾರಗಳಿಗೆ ಮೂಕ ಸಾಕ್ಷಿಗಳಾಗಿದ್ದೇವೆ.ಆಗಲೇ ಬೇಕು ಯಾಕೆಂದರೆ ಇದು ನಾವು ಮಾಡಿದ ಕರ್ಮದ ಫಲವಲ್ಲವೆ..ಇಷ್ಟಾದರು ಇನ್ನು ಏನೂ ಆಗದಂತೆ ಸುಮ್ಮನಿದೇವೆಲ್ಲವೇ.  ಹಾಗಂತ ಇದು ನಮ್ಮ ಕೈಲಾಗದತನವಲ್ಲ,ಇದು ನಮ್ಮ ಅಸಾಹಯಕತೆ.ಯಾರನ್ನು ನಂಬಬೇಕೆನ್ನುವ ಗೊಂದಲ,ಯಾರು ವಿಶ್ವಾಸರ್ಹರು ಎನ್ನುವ ಆತಂಕ,ಯಾರೊಟ್ಟಿಗೆ ಹೆಜ್ಜೆ ಹಾಕಿದರೆ ನಾವು ಗುರಿತಲುಪಬಹುದು ಎಂಬ ಭಯ,ಈ ಗೊಂದಲವೇ ನಮ್ಮ ದೇಶದ ಈಗಿನ ದೊಡ್ಡ ದುರಂತ.ಇದೆಕ್ಕೆಲ್ಲಾ ಕಾರಣ ಆದರ್ಶ ವ್ಯಕ್ತಿಗಳ ,ಉತ್ತಮ ನಾಯಕರ ಕೊರತೆ.ಎಲ್ಲಾ ಕ್ಷೇತ್ರಗಳಲ್ಲಿ ಆದರ್ಶವೆನ್ನಬಹುದಾದ ಬೆರಳಣಿಕೆಯಷ್ಟೆ ವ್ಯಕ್ತಿಗಳಿರುವುದು ನಮ್ಮ ದೇಶದ ಈ ಎಲ್ಲಾ ಹಿಮ್ಮುಕ ಚಲನೆಗಳಿಗೆ ಕಾರಣ.ಅದರಲ್ಲು ದೇಶದ ಅಭಿವೃದ್ದಿಯಲ್ಲಿ ಪ್ರಮುಖವೆನ್ನುವ ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತ ಅಂತಹ ವ್ಯಕ್ತಿಗಳೇ ಇಲ್ಲದೆ ಇರುವುದು,ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡಿದೆ.ಇದರಿಂದಾಗಿ ಆ ಕ್ಷೇತ್ರ ಅರಾಜಕತೆಯಿಂದ ತುಂಬಿ ಹೋಗಿದೆ,ಇದು ನಮ್ಮ ನಾಳಿನ ನಿರೀಕ್ಷೆಗಳಾದ ಯುವಕರಲ್ಲಿ ರಾಜಕೀಯದಲ್ಲಿ ಎಳ್ಳಷ್ಟು ನಂಬಿಕೆ ಇಲ್ಲದಂತೆ ಮಾಡಿದೆ,ಹೀಗಾಗಿರುವುದು ದೇಶಕ್ಕೆ ಮಾರಕವೆನ್ನುವುದರಲ್ಲಿ ಎರಡು ಮಾತಿಲ್ಲ.ಇವತ್ತು ನಮ್ಮ ಯುವಕರ ಮುಂದೆ ನಾನು ಹೀಗೆ ಆಗ ಬೇಕೆನ್ನುವ,ಅವರ ರೀತಿಯಲ್ಲಿ ಸಾಮಾಜದಲ್ಲಿ ಬಾಳಿಬದುಕ ಬೇಕೆಂದು ಗುರುತಿಸಲು ಅವರಿಗೆ ಸೂಕ್ತ ವ್ಯಕ್ತಿಗಳು ಇಲ್ಲವಾದ್ದು ವಿಪಾರ‍್ಯಸ,ಇದು ಅವರನ್ನು ಸಹಜವಾಗಿ ಮೌನಕ್ಕೆ ಶರಾಣಗುವಂತೆ ಮಾಡಿದೆ.ಇನ್ನು ಅವರು ಇದುವರೆಗೆ ವಿಶ್ವಾಸರ್ಹರು ಎಂದು ನಂಬಿದ್ದವರು ,ವಿಶ್ವಾಸರ್ಹರಲ್ಲಾ(ಉದಾ;ಯಡಿಯೂರಪ್ಪ) ಎಂದು ತಿಳಿಸುವ ಘಟನೆಗಳು ಪದೆ,ಪದೆ ನಡೆದಾಗ ಆದ ಆಘಾತ ಅವರನ್ನು ರೋಸಿ ಹೋಗಿಸಿವೆ.ಒಟ್ಟಿನಲ್ಲಿ ಪ್ರಸ್ತುತ ನಮ್ಮ ಭಾರತೀಯ ಸಮಾಜ ಉತ್ತಮ ನಾಯಕನನ್ನು,ಆದರ್ಶ ವ್ಯಕ್ತಿಗಳನ್ನು ಅನಿವಾರ್ಯವಾಗಿ ಆಗ್ರಹಿಸುತ್ತದೆ,ಹೊಸ ರಾಜಕೀಯ ಶಖೆಗಾಗಿ ಕಾಯುತ್ತಿದೆ.ಹಾಗಂತ ಭಾರತದ ಯುವಕರು ’ಆ’ ನಾಯಕನಿಗಾಗಿ ಅಥವಾ ವ್ಯಕ್ತಿಯ ಆಗಮನಕ್ಕಾಗಿ ಕಾಯಬೇಕಿಲ್ಲ,ಅದು ನೀವು ಆಗಬಹುದು..

ಶುಕ್ರವಾರ, ಫೆಬ್ರವರಿ 18

ನಂಬಿಕೆ ಮೇಲೆ ಅತಿ ಪ್ರಯೋಗ ಸಲ್ಲದು

"ನಮ್ಮ ದೇಶದ ನೆಲೆಗಟ್ಟೆನ್ನುವುದು ನಮ್ಮಲ್ಲಿನ ಹಲವಾರು ಆಚಾರ,ವಿಚಾರಗಳಲ್ಲಿ ನಿಂತಿದೆ,ಹೀಗಿರುವಾಗ ಆಧುನಿಕತೆಯ (ಹೊಸತನದ)ಹೆಸರಿನಲ್ಲಿ (ಕೆಲವೊಂದು) ನಂಬಿಕೆಗಳ ಅಸ್ತಿತ್ವನ್ನು ಪ್ರಶ್ನಿಸಿಸುವುದು ಅಸಂಮಜವಲ್ಲವೇ".ಅಲೆಮಾರಿ      

ನಾವು ಮನುಷ್ಯರೇ ಹೀಗೆ, ನಮಗೇನಾದರು ಹೆಚ್ಚಾಗಿ ವಿಷಯ ತಿಳಿದಿದ್ದರೆ ಬೇಡದ ವಿಚಾರಗಳಲ್ಲಿಯೂ ಮೂಗು ತೂರಿಸುವುದು ಜಾಸ್ತಿ. ಅದರ ವಿವಿಧ ಮಜಲುಗಳನ್ನು ಕಂಡು ಹಿಡಿಯುದರಲ್ಲಿಯೆ ನಮಗೆ ಆಸಕ್ತಿ. ಆ ವಿಚಾರಗಳು ಪ್ರಸ್ತುತ ಅಗತ್ಯವಿದೆಯೊ, ಅದರ ಪರಣಾಮವೇನು, ಸಾಮಜಕ್ಕೇನು ಲಾಭ ಎಂದು ಆಲೋಚಿಸದೆ ನಾವು ಮನ್ನುಗ್ಗಿ ಮಂಡಿಸಿ ಬಿಡುತ್ತೇವೆ. ಆದರೆ ಇದರ ಪರಿಣಾಮ ಅನುಭವಿಸುವರು  ಜನರು,ಹೋಗುವುದು ಅವರ ನಂಬಿಕೆ,ವಿಶ್ವಾಸಗಳು.ಇದು ಇಪ್ಪತ್ತೊಂದನೆಯ ಜಮಾನ  ಇಲ್ಲಿ ಎಲ್ಲವೂ ವೇಗದ ಸೆಳೆಯಲ್ಲಿದೆ. ಇಲ್ಲಿ ನಂಬಿಕೆ, ವಿಶ್ವಾಸಗಳಗೆ ಕೆಳಸ್ತರದ ಜಾಗ . ಅಭಿವೃದ್ದಿ, ಯಾಂತ್ರಿಕತೆ, ಸ್ವಾರ್ಥ, ಅಮಾನವೀಯಕ್ಕೆ  ಅಗ್ರಸ್ಥಾನ. ಇದು ಈ ಶತಮಾನದ ಪ್ರತ್ಯೇಕ ಗುಣವೆಂದರೂ ತಪ್ಪಾಗಲಾರದು. ಇದರಂತೆಯೇ  ಬೆಳೆದಿದ್ದೇವೆ ನಾವು ನೀವು ಕೂಡ .
ಹಿಂದೊಂದು ಕಾಲವಿತ್ತು ಅಲ್ಲಿ ವಿಶ್ವಾಸ ನಂಬಿಕೆಯೇ ಎಲ್ಲಾವಾಗಿತ್ತು, ಕೆಲವೊಂದು ವಿಚಾರಗಳಲ್ಲಿ ಮೌಢ್ಯವಿದ್ದರು, ಅದರಲ್ಲಿ ಸಮಾಧಾನ, ಸೌಖ್ಯವಿತ್ತು. ಆದರೆ ಆಧುನಿಕತೆಯ ಗಾಳಿ ಸೋಕಿದ್ದೆ ತಡ ಇವೆಲ್ಲವೂ ಅದಲು ಬದಲು. ಹಾಗಂತ ಇದು ಆಧುನಿಕತೆಯ ವಿರೋಧವಲ್ಲ, ಇದು ಅತೀ ಆಧುನೀಕತೆಯ ನಿರಾಕರಣೆಯಷ್ಟೆ. ಯಾಂಕೆಂದರೆ ಈ ಅತಿ ಆಧುನಿಕತೆ ನಮಗೆ ತಂದಿಟ್ಟ ನಷ್ಟ ಅಷ್ಟಿಷ್ಟಲ್ಲ. ಈ ಸಮಾಜ ಬೆಳೆದಂತೆ, ಸಂಶೋದನೆ ನಮ್ಮಲ್ಲಿನ ಮೌಢ್ಯದ ಪೊರೆಯನ್ನು ಕಳಚುತ್ತಾ ಬಂದು ಅವುಗಳ ಅಸ್ತಿತ್ವವನ್ನೆ  ಕಳೆದುಕೊಳ್ಳುವಂತೆ ಮಾಡಿತು,ಇದು ಶ್ಲಾಘನೀಯ ಕೂಡ.ಆದರೆ ನಂಬಿಕೆಗಳ ಮೇಲೆ ಸಂಶೋದನೆಗಳ ಅತಿಯಾದ ಪ್ರಯೋಗ , ಅದರಲ್ಲಿಯೆ ಹೊಸತನದ ಹುಡುಕಾಟ , ನಮ್ಮ ವ್ಯವಸ್ಥೆಯ ದಿಕ್ಕನ್ನೆ ಬದಲಾಯಿಸಿತು, ಜನರನ್ನು ಸ್ವಾರ್ಥರನ್ನೂ, ಸಂಕುಚಿತರನ್ನಾಗಿಸಿತು. ಇದಕ್ಕಿಂತಲೂ ಮಿಗಿಲಾಗಿ ಅವರನ್ನೂ ಭಾವನೆಗಳಿಲ್ಲದ ಯಾಂತ್ರಿಕ ಮಾನವರನ್ನಾಗಿಸಿತು, ಇದೊಂದು ದುರಂತವೆ ಸರಿ.
ಇದೀಗ ಇಂತಹ ಮತ್ತೊಂದು ಸರದಿ ಅದುವೆ ಶಬರಿಮಲೆ ಜ್ಯೋತಿ ಬಗೆಗೆ ಇತ್ತೀಚೆಗೆ ಎದ್ದಿರುವ ವಾದ. ಅದು ಸತ್ಯವೊ, ಮಿತ್ಯವೊ ಎನ್ನುವ ಸಂಶೋದಕರ , ಚಿಂತಕರ ನಡೆ, ಅದರ ಸತ್ಯಶೋದನೆಯೆಡೆಗಿನ ಹಲವರ ಅಮಿತ ಆವೇಶ ನೋಡಿದರೆ ಬಹುಷ ಅವರು ಇದರ ಪರಿಣಾಮಗಳ ಬಗ್ಗೆ ಆಲೋಚಿಸಿಲ್ಲವೇನೊ ಅನ್ನಿಸುತ್ತಿದೆ. ನಂಬಿಕೆಗಳು ಕ್ಷೀಣವಾಗುತ್ತಿರುವ ಈ ಕಾಲದಲ್ಲಿ ಇಂತಹ ಕೆಲವು ಆಚಾರ, ವಿಚಾರಗಳು ಜನರನ್ನು ಕೋಟಿ,ಕೋಟಿ ಸಂಖ್ಯೆಯಲ್ಲಿ ಒಂದಾಗಿ ಒಂದಡೆ ಸೇರಿಸುತ್ತಿದೆ ಎನ್ನುವುದೇ ವಿಶೇಷ. ಆದರೆ ಅಲ್ಲಿಗೂ ಕತ್ತರಿ ಹಾಕಲು ಹೊರಟಿದ್ದಾರಲ್ಲ ಇವರು, ಏನು ಹೇಳಬೇಕು ಇವರ ನಡೆಗೆ. ನಾವೇನು,  ನಮ್ಮ ದೇಶವೇನು, ನಮ್ಮ ಮೂಲ ಸಂಸ್ಕ್ರತಿಯೇನೆಂದು ಅರಿಯದೆ ಇಂತಹ ವಿಚಾರಗಳಿಗೆ ಆಸ್ಪದ ಕೊಟ್ಟದ್ದು ಖಂಡಿತವಾಗಿಯು ಅಸಂಮಂಜಸ. ಇಲ್ಲೇನು ಮೌಢ್ಯತೆಯಿಲ್ಲ, ಜನರು ಮೋಸ ಹೋಗುವುದಿಲ್ಲ, ನಮ್ಮ ಪುರಾಣ, ಐತಿಹಾಸಿಕ ಸತ್ಯಗಳು ಹೇಳುವಂತೆ ಇಲ್ಲಿ ನಡೆಯುತ್ತಿದೆ, ಮತ್ಯಾಕೆ ಈ ಅತಿ ಬುದ್ದಿವಂತಿಕೆಯ ನಡೆ. ಇದರಿಂದ ನೋವಾಗುದು ಆಸಂಖ್ಯಾತ ಜನರ ನಂಬಿಕಗೆ, ಭಾವನೆಗಳಿಗೆ. ನಮ್ಮಲ್ಲಿ ಅಭಿವೃದ್ದಿ, ಸಂಶೋದನೆ ಬೇಕು ಆದರೆ ಯಾವುದು ಅತಿಯಾದರೆ ಅದು ನಮಗೆ ಮಾರಕವಾಗುತ್ತದೆ. ಆದ್ದರಿಂದ ಜನರನ್ನು ತೀರಾ ನಿರ್ಭಾವುಕರನ್ನಾಗಿಸುವ ಇಂತಹ ವಿಚಾರಗಳ ಬಗ್ಗೆ ಮಾತನಾಡುವಾಗ, ಸಂಶೋಧಿಸುವಾಗ ಸ್ವಲ್ಪ ಆಲೋಚಿಸಿ ಬುದ್ದಿ ಜೀವಿಗಳೆ.